
ಕನಮಡಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಶಿಬಿರ ಹಾಗೂ ಗಿಡ ನಾಟಿ ಕಾರ್ಯಕ್ರಮ
ವಿಜಯಪುರ, ಜೂನ್ 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ವಿಜಯಪುರ ತಾಲೂಕು-2ರ ಹೋನವಾಡ ವಲಯದ ಕನಮಡಿ ಕಾರ್ಯಕ್ಷೇತ್ರದ ಕನಮಡಿ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಶಿಬಿರ ಹಾಗೂ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಮಾತೆ ಶ್ರೀಮತಿ ಎ.ಎಸ್. ಹಾಜೇರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಿನ ಯೋಜನಾಧಿಕಾರಿ ಸತೀಶ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಪರಿಸರ ಜಾಗೃತಿ ಶಿಬಿರದ ಉದ್ದೇಶಗಳ ಕುರಿತು ಮಾಹಿತಿ ನೀಡಿದರು.
ಸಹ ಶಿಕ್ಷಕರಾದ ಜೆ.ಬಿ. ಯಳಜೇರಿ ಅವರು ಪರಿಸರ ಸಂರಕ್ಷಣೆ, ಗಿಡ ನಾಟಿಯ ಮಹತ್ವ ಹಾಗೂ ಪರಿಸರ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಮೇಲ್ವಿಚಾರಕರಾದ ಪ್ರವೀಣ್ ದೊಡ್ಡಮನಿ, ವಲಯ ಮೇಲ್ವಿಚಾರಕರಾದ ಗೋಪಾಲ, ಸೇವಾ ಪ್ರತಿನಿಧಿ ಸುರೇಖಾ, ಶಾಲೆಯ ಎಲ್ಲಾ ಸಹ ಶಿಕ್ಷಕರು ಹಾಗೂ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಎಸ್.ಆರ್. ಕೆಳಗಿನಮಠ ನೆರವೇರಿಸಿದರು. ಐ.ಎ. ಬಿರಾದಾರ ಸ್ವಾಗತಿಸಿದರು. ಶ್ರೀಮತಿ ಎ.ಎಸ್. ಗೋಲಸಂಗಿ ವಂದನಾರ್ಪಣೆ ಸಲ್ಲಿಸಿದರು.
