• Wed. Sep 9th, 2026

ಜಾನಪದವು ಸರ್ವಕಾಲಿಕ – ಎಸ್.ಎಂ. ಉಪ್ಪಾರ

ByAnand

Aug 22, 2026

ಇಂಡಿ:

ಸಮೀಪದ ನಾದ ಕೆ.ಡಿ. ಸರ್ಕಾರಿ ಪ್ರೌಢಶಾಲೆಯಲ್ಲಿ ಆಗಸ್ಟ್ 22, 2026ರಂದು ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಎ. ನಂದಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಎಸ್.ಎಂ. ಉಪ್ಪಾರ ಅವರು, ಜಾನಪದವು ಸರ್ವಕಾಲಿಕವಾಗಿದ್ದು, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.ಕರ್ನಾಟಕದ ಉತ್ತರ ಭಾಗ ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಸೋಲಿಗರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸುಡಗಾಡು ಸಿದ್ಧರು ಮತ್ತು ಗೊಂದಳಿ ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಜಾನಪದ ಪರಂಪರೆಯನ್ನು ಹೊಂದಿವೆ. ಜಾನಪದದಲ್ಲಿ ಶಿಷ್ಟ ಹಾಗೂ ಅಶಿಷ್ಟ ಸಾಹಿತ್ಯದ ಅಂಶಗಳಿದ್ದರೂ, ಅವುಗಳಲ್ಲಿ ಹಾಸ್ಯ, ವಿಡಂಬನೆ, ಚಿಂತನೆ ಹಾಗೂ ಜೀವನ ಮೌಲ್ಯಗಳು ಅಡಕವಾಗಿವೆ ಎಂದು ಅವರು ವಿವರಿಸಿದರು.ಒಡಪು, ಒಡಗೆತೆ, ಕಥೆ, ತ್ರಿಪದಿಗಳು ಸೇರಿದಂತೆ ಹಲವು ಪ್ರಕಾರಗಳ ಮೂಲಕ ಜಾನಪದವು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಶ್ರಮಜೀವಿಗಳ ಬದುಕಿನಲ್ಲಿ ಕಸ ತೆಗೆಯುವಾಗ, ಬೀಸುವಾಗ, ಕುಟ್ಟುವಾಗ, ಮದುವೆ ಮತ್ತಿತರ ಸಂದರ್ಭಗಳಲ್ಲಿ ಜಾನಪದ ಹಾಡುಗಳು ಮತ್ತು ಆಚರಣೆಗಳು ಬೆಸೆದುಕೊಂಡಿವೆ ಎಂದು ಎಸ್.ಎಂ. ಉಪ್ಪಾರ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಂ. ಬಂಡಗಾರ ವಹಿಸಿದ್ದರು. ಪಾವನ ಸಾನಿಧ್ಯ ವಹಿಸಿದ್ದ ಶಿರಶಾಡ ಮಠದ ಪೂಜ್ಯ ಅಭಿನವ ಮುರುಗೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಶಿಸ್ತು ಮತ್ತು ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡುವುದು ಅಗತ್ಯ. ಜಾನಪದ ಸಂಸ್ಕಾರವನ್ನು ಮಕ್ಕಳಿಗೆ ಪರಿಚಯಿಸಿದರೆ ಸಮಾಜದ ಸಂಸ್ಕೃತಿ ಉಳಿಯುತ್ತದೆ; ಇಲ್ಲವಾದರೆ ಅದು ಅಳಿದುಹೋಗುವ ಅಪಾಯವಿದೆ ಎಂದು ಹೇಳಿದರು.ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್‌ನ ಡಾ. ಜಾನಪದ ಎಸ್. ಬಾಲಾಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ಜಾನಪದ ಸಮ್ಮೇಳನಗಳನ್ನು ಆಯೋಜಿಸಿ ಜಾನಪದ ಸಂರಕ್ಷಣೆಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾನಪದ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಯುವ ಪೀಳಿಗೆಗೆ ಜಾನಪದದ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಸವರಾಜ ಅಂಕದ, ಸರ್ದಾರ್ ಮುಲ್ಲಾ, ಸಿದ್ಧಾರೂಢ ಕೊಳ್ಳೂರ, ಅಣ್ಣಾರಾಯ ಗುಗದಡ್ಡಿ, ಸಂಗನಗೌಡ ಹಚ್ಚಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಬುಡಕಟ್ಟು ಕಲಾವಿದರಾದ ದೇವಿಂದ್ರ ಪ. ಗೊಂದಳಿ, ಬಾಬು ಗೊಂದಳಿ, ಸುಭಾಸ್ ಗೊಂದಳಿ ಮತ್ತಿತರರು ಗೊಂದಳಿ ಕಲಾ ಪ್ರದರ್ಶನ ನೀಡಿದರು. ಸುಭಾಸ್ ಕಾಮಾ ಅವರು ಎಕ್ತಾರಿ ಪದಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು.ಕಾರ್ಯಕ್ರಮವನ್ನು ಸಂಗನಗೌಡ ಹಚ್ಚಡದ ನಿರೂಪಿಸಿದರು. ಅಣ್ಣಾರಾಯ ಗುಗದಡ್ಡಿ ವಂದಿಸಿದರು.ಜಾನಪದ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ; ಜಾನಪದ ಬೆಳೆದರೆ ನಮ್ಮ ಮುಂದಿನ ಪೀಳಿಗೆಯ ಬೇರುಗಳು ಗಟ್ಟಿಯಾಗುತ್ತವೆ.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *