• Wed. Sep 9th, 2026

ಅರ್ಹ ವ್ಯಕ್ತಿಯು ಅಧಿಕಾರವಿಲ್ಲದಿದ್ದರೂ ಮಾನ್ಯನೆನಿಸಿಕೊಳ್ಳುತ್ತಾನೆ”– ಮಲಘಾಣ ಕಾಲೇಜಿನ ಪ್ರಾಚಾರ್ಯ ಬಸವರಾಜ ಜಾಲವಾದಿ

ByAnand

Aug 11, 2026

ವರದಿ: ಮಹೇಶಕುಮಾರ ಹರಿಜನಕೊಲ್ಹಾರ: ತೊಂದರೆ, ಆತಂಕ ಹಾಗೂ ಅಡ್ಡಿ-ಆತಂಕಗಳಿಗೆ ಹೆದರದೆ ಧೈರ್ಯದಿಂದ ಮುನ್ನಡೆದು ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಮಲಘಾಣ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಜಾಲವಾದಿ ಹೇಳಿದರು.ಮಲಘಾಣ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 2026–27ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಗ್ರಾಮದ ಗಣ್ಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಅವರು ಮಾತನಾಡಿದರು.“ಸಮಾಜದಲ್ಲಿ ಮೂರು ವರ್ಗದ ಜನರನ್ನು ಕಾಣಬಹುದು. ತೊಂದರೆ, ಆತಂಕ ಹಾಗೂ ಭಯದಿಂದಾಗಿ ಕಾರ್ಯವನ್ನೇ ಮಾಡದವರು ಒಂದು ವರ್ಗ. ಕಾರ್ಯಾರಂಭ ಮಾಡಿದರೂ ಅಡ್ಡಿ ಎದುರಾದಾಗ ಹೆದರಿ ಕಾರ್ಯವನ್ನು ಅರ್ಧದಲ್ಲೇ ನಿಲ್ಲಿಸುವವರು ಎರಡನೇ ವರ್ಗ. ಆದರೆ ಎಷ್ಟೇ ಅಡ್ಡಿ-ಆತಂಕಗಳು, ತೊಂದರೆಗಳು ಎದುರಾದರೂ ಅವುಗಳನ್ನು ಧೈರ್ಯದಿಂದ ಎದುರಿಸಿ ಕಾರ್ಯವನ್ನು ಪೂರ್ಣಗೊಳಿಸುವವರು ಮೂರನೇ ವರ್ಗದವರು. ವಿದ್ಯಾರ್ಥಿಗಳು ಈ ಮೂರನೇ ವರ್ಗದವರಾಗಬೇಕು” ಎಂದು ಅವರು ಹೇಳಿದರು.ಅಧಿಕಾರ ಮತ್ತು ಸಂಪತ್ತು ದೊಡ್ಡದಲ್ಲ; ವ್ಯಕ್ತಿಯ ಸಾಧನೆಯೇ ಮುಖ್ಯ. ಅಂತಹ ಅರ್ಹ ವ್ಯಕ್ತಿಯು ಯಾವುದೇ ಅಧಿಕಾರದ ಸ್ಥಾನದಲ್ಲಿರದಿದ್ದರೂ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಾನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ ಅವರು, “ಎಲ್ಲಿದೆ ನಂದನ? ಎಲ್ಲಿದೆ ಬಂಧನ? ಎಲ್ಲಾ ಇವೆ ಈ ನಮ್ಮೊಳಗೆ…” ಎಂಬ ಸಂದೇಶದ ಮೂಲಕ ವಿದ್ಯಾರ್ಥಿಗಳು ತಮ್ಮೊಳಗಿನ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಓದಿನಲ್ಲಿ ಆಸಕ್ತಿ ಮತ್ತು ಅಭಿರುಚಿ ಮುಖ್ಯಮುಖ್ಯ ಅತಿಥಿಯಾಗಿ ಮಾತನಾಡಿದ ಗ್ರಾಮದ ಗಣ್ಯ ರಮೇಶ ನಿಂಗನೂರ, ಸ್ವಂತ ಊರಿನಲ್ಲಿಯೇ ವಾಣಿಜ್ಯ ವಿಭಾಗದ ಕಾಲೇಜು ಆರಂಭಗೊಂಡಿರುವುದರಿಂದ ವಿದ್ಯಾರ್ಥಿಗಳು ಪರ ಊರಿಗೆ ತೆರಳಿ ಓದುವ ಅನಿವಾರ್ಯತೆ ಇಲ್ಲವಾಗಿದೆ ಎಂದರು.ವಾಣಿಜ್ಯ ವಿಭಾಗ ಮಾತ್ರವಲ್ಲದೆ ಕಲೆ, ವಿಜ್ಞಾನ ಸೇರಿದಂತೆ ಯಾವುದೇ ವಿಭಾಗವಿದ್ದರೂ ಓದುವ ಮನಸ್ಥಿತಿ, ಆಸಕ್ತಿ ಮತ್ತು ಅಭಿರುಚಿ ಮುಖ್ಯ. ವಿದ್ಯಾರ್ಥಿಗಳು ಗಮನವಿಟ್ಟು ಓದಿನಲ್ಲಿ ತಲ್ಲೀನರಾಗಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯರ ಕಾರ್ಯಚಟುವಟಿಕೆಗೆ ಮೆಚ್ಚುಗೆಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಣ್ಣ ನಾವಿ ಮಾತನಾಡಿ, ಉನ್ನತೀಕರಿಸಿದ ಕಾಲೇಜು ನಮ್ಮದಾಗಿರುವುದರಿಂದ ಇನ್ನು ಮುಂದೆ ಎಲ್ಲರೂ ಪ್ರಾಚಾರ್ಯರ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗಾಗಿ ಎಲ್ಲರೂ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಗ್ರಾಮದ ಗಣ್ಯರ ಸಹಕಾರ ಪಡೆದು ಕಾಲೇಜಿಗೆ ಅಗತ್ಯವಿರುವ ಕುಡಿಯುವ ನೀರು ಹಾಗೂ ಶೌಚಾಲಯದ ದುರಸ್ತಿ ಕಾರ್ಯಕ್ಕಾಗಿ ಪ್ರಾಚಾರ್ಯ ಬಸವರಾಜ ಜಾಲವಾದಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಪ್ರಯತ್ನಿಸುತ್ತಿರುವುದು ಹಾಗೂ ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.ದಾನಿಗಳನ್ನು ಸತ್ಕರಿಸಲಾಯಿತುಕಾಲೇಜಿನ ವಿದ್ಯಾರ್ಥಿಗಳ ಶುಲ್ಕ, ವೈಟ್‌ಬೋರ್ಡ್ ಹಾಗೂ ಡಯಾಸ್‌ಗಾಗಿ ಕಾಣಿಕೆ ನೀಡಿದ ಸುರೇಶ ವಠಾರ, ಅಶೋಕ ನಿಂಗನೂರ ಹಾಗೂ ರಮೇಶ ನಿಂಗನೂರ ಅವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.ವೇದಿಕೆಯಲ್ಲಿ ಸುರೇಶ ವಠಾರ, ಅಶೋಕ ನಿಂಗನೂರ, ರಮೇಶ ನಿಂಗನೂರ, ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕೋರಿ, ವಿಠಲ ಮಾದರ, ಶಿವಾನಂದ ಅಮಲಜೇರಿ, ಪಾಂಡುರಂಗ ಕರಾಬಿ, ಮಂಜುಳಾ ಚಂದ್ರಪ್ಪಗೋಳ, ನಿಸರ್ಗ ಖಾಸ್ತರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿ ಶುಭ ಹಾರೈಸಲಾಯಿತು.ಲಕ್ಷ್ಮೀ, ರಶ್ಮಿ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಅಕ್ಷತಾ, ಸೌಮ್ಯ, ಸುಧಾ ಹಾಗೂ ರೇಣುಕಾ ಸ್ವಾಗತ ಗೀತೆ ಹಾಡಿದರು. ಅತಿಥಿ ಉಪನ್ಯಾಸಕ ಯಲ್ಲಪ್ಪ ಹಳಬರು ಕಾರ್ಯಕ್ರಮ ನಿರ್ವಹಿಸಿದರು. ದುರ್ಗೇಶ್ ಮಲಘಾಣ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು.

By Anand

ಸಿಂಧೂರ ಸಾಮ್ರಾಜ್ಯ 24x7 ನ್ಯೂಸ್

Leave a Reply

Your email address will not be published. Required fields are marked *